ಮಿರ್ಡಾಲ್, ಗುನ್ನಾರ್
	1898-1987. ಪ್ರಸಿದ್ಧ ಅರ್ಥಶಾಸ್ತ್ರಜ್ಞ , ಮಾನವತಾವಾದಿ. 1974ರ ನೊಬೆಲ್ ಪ್ರಶಸ್ತಿ ವಿಜೇತ. ಹುಟ್ಟಿದ್ದು ಸ್ವೀಡನ್ನಿನ ಸ್ಕ್ಯಾಟುಂಗ್‍ಬಿನ್ ಹಳ್ಳಿಯಲ್ಲಿ. ತಂದೆ ಒಬ್ಬ ಬಡಗಿ. ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಉನ್ನತ ವಿದ್ಯಾಭ್ಯಾಸ ಮಾಡಿದ (1925-30). ಅನಂತರ ಜಿನೀವದ ಪೋಸ್ಟ್ ಗ್ರಾಜುಯೇಟ್ ಇನ್‍ಸ್ಟಿಟ್ಯೂಟ್ ಆಫ್ ಇಂಟರ್‍ನ್ಯಾಷನಲ್ ಸ್ಟಡೀಸ್‍ನಲ್ಲಿ ಉಪಪ್ರಾಧ್ಯಾಪಕನಾದ (1930-31). ಮುಂದೆ ಸ್ಟಾಕ್ ಹೋಮ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕನಾದ (1933). ಅಧ್ಯಾಪಕ ವೃತ್ತಿಯ ಜೊತೆಗೇ ರಾಜಕೀಯ ಕ್ಷೇತ್ರದಲ್ಲೂ ಆಸಕ್ತನಾಗಿದ್ದ ಈತ ಸರ್ಕಾರದ ಹಣಕಾಸು ಸಲಹೆಗಾರ. ಸ್ವೀಡನ್ನಿನ ಸೆನೆಟ್‍ನಲ್ಲಿ ಡೆಮೊಕ್ರಾಟ್ ಪಕ್ಷದ ಸದಸ್ಯ, 1945-47ರಲ್ಲಿ ವಾಣಿಜ್ಯಮಂತ್ರಿಯಾಗಿದ್ದ. ಎರಡನೆಯ ಮಹಾಯುದ್ಧದ ಬಳಿಕ ವಿಶ್ವಸಂಸ್ಥೆಯಲ್ಲಿ ಯೂರೋಪಿನ ಆರ್ಥಿಕ ಆಯೋಗದ ಕಾರ್ಯಕಾರಿ ಸಮಿತಿಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದ.

	ಸುಧಾರಣೆಯ ಮೂಲಕ ಜಗತ್ತಿನಲ್ಲಿ ನಂದನವನವನ್ನು ನಿರ್ಮಿಸಬಹುದೆಂದು ನಂಬಿದ್ದ ಆಶಾವಾದಿ. ಆದರೆ ಕೊನೆಗಾಲದಲ್ಲಿ ಇವನ ಆಶೆಗಳು ಭಗ್ನವಾಗಿ ತನ್ನ ನಂಬಿಕೆ ಕೇವಲ ಭ್ರಮೆ ಎಂಬ ತೀರ್ಮಾನಕ್ಕೆ ಬಂದ. ಜಗತ್ತು ನಾಯಿಪಾಲಾಗುತ್ತಿದೆ, ನರಕಕ್ಕೆ ಬೀಳುತ್ತಿದೆ ಎಂದು ಕೊನೆಗಾಲದಲ್ಲಿ ಉದ್ಗಾರ ತೆಗೆದ. ಈ ಪ್ರಪಂಚ ಯಾವುದರಿಂದಲೂ ಪಾಠ ಕಲಿಯದು. ಯುದ್ಧ ಬಂದರೂ ಯುದ್ಧ ಹೋದರೂ ಜನಕ್ಕೆ ಬುದ್ಧಿ ಬರಲಿಲ್ಲ. ಮಹಾಯುದ್ಧಕ್ಕೆ ಮುಂಚೆ ಹೇಗಿತ್ತೋ ಅನಂತರದ ದಿನಗಳೂ ಹಾಗೆ ಉಳಿದಿವೆ; ಇದು ಇಂದಿನ ರಾಜಕೀಯ ಪರಿಸ್ಥಿತಿ ಎಂಬ ಚಿಂತನೆ ಈತನನ್ನು ಸಾಯುವ ತನಕ ಕಾಡಿತ್ತು. ಕಲ್ಯಾಣಕಾರಕವಲ್ಲದ್ದು ಕ್ಷುಲ್ಲಕ ಎಂಬುದು ಇವನ ಮನೋಧರ್ಮ.

	1944ರಲ್ಲಿ ಬರೆದ ಆ್ಯನ್ ಅಮೆರಿಕನ್ ಡೈಲೆಮ ಎಂಬ ಕೃತಿಯಿಂದಾಗಿ ಅಂತರರಾಷ್ಟ್ರೀಯ ಖ್ಯಾತಿ ಪಡೆದ. ಇದರಲ್ಲಿ ಅಮೆರಿಕದ ನಿಗ್ರೋಗಳ ಸ್ಥಿತಿ ಕುರಿತು ವಿವೇಚಿಸಲಾಗಿದೆ. ಇದಕ್ಕೂ ಮುನ್ನ ತನ್ನ ಪತ್ನಿ ಆಲ್ವಾ ಅವರೊಂದಿಗೆ ಕ್ರೈಸಿಸ್ ಇನ್ ದಿ ಪಾಪ್ಯುಲೇಷನ್ ಇಷ್ಯೂ ಎಂಬ ಕೃತಿ ಬರೆದು ಸಾಕಷ್ಟು ಪ್ರಖ್ಯಾತನಾಗಿದ್ದ. 1966ರಲ್ಲಿ ಬರೆದ ಏಷ್ಯನ್ ಡ್ರಾಮಾ ಎಂಬುದು ಇವನ ಮಹಾಕೃತಿ. ಇದರಲ್ಲಿ ದಕ್ಷಿಣ ಏಷ್ಯದ ಆರ್ಥಿಕ ರಾಜಕೀಯ ಸಮಸ್ಯೆಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಲಾಗಿದೆ. ಅಭಿವೃದ್ಧಿಶೀಲ ದೇಶಗಳ ಬಡತನದ ಸ್ವರೂಪ ಮತ್ತು ಅದಕ್ಕೆ ಕಾರಣವನ್ನು ಕುರಿತಂಥ ಆಳವಾದ ಚಿಂತನೆ ಇದೆ. ಇವಲ್ಲದೆ ಮಾನಿಟರಿ ಈಕ್ವಲಿಬ್ರಿಯಮ್ (1931). ದಿ ಪೊಲಿಟಿಕಲ್ ಎಲೆಮೆಂಟ್ ಇನ್ ದಿ ಡೆವಲಪ್‍ಮೆಂಟ್ ಆಫ್ ಎಕನಾಮಿಕ್ ಥಿಯರಿ (1953), ಪಾಪ್ಯುಲೇಷನ್ ಎ ಫ್ರಾಬ್ಲಮ್ ಆಫ್ ಡೆಮಾಕ್ರಸಿ (1940), ಆ್ಯನ್ ಇಂಟರ್‍ನ್ಯಾಷನಲ್ ಎಕಾನಮಿ (1956), ರಿಚ್‍ಲ್ಯಾಂಡ್ಸ್ ಅಂಡ್ ಪೂರ್ (1957), ಬಿಯಾಂಡ್ ದಿ ವೆಲ್‍ಫೇರ್ ಸ್ಟೇಟ್ (1960) ಆಬ್‍ಜೆಕ್ಟಿವಿಟಿ ಇನ್ ಸೋಸಿಯಲ್ ರಿಸರ್ಚ್ (1969). ದಿ ಛಾಲೆಂಜ್ ಆಫ್ ವಲ್ರ್ಡ್ ಪಾವರ್ಟಿ (1970) ಮುಂತಾದ ಅನೇಕ ಗ್ರಂಥಗಳನ್ನು ರಚಿಸಿದ್ದಾನೆ.

	ಭಾರತದಂಥ ರಾಷ್ಟ್ರಗಳು ಕೆಲವು ವರ್ಗಗಳಿಗೆ ಅಪ್ರಿಯವೆನಿಸಬಹುದಾದ ಕಟುತರ ನಿರ್ಣಯಗಳನ್ನು ತೆಗೆದುಕೊಳ್ಳದಿರುವುದೇ ಭಾರತದಲ್ಲಿಯ ಬಡತನಕ್ಕೆ ಮುಖ್ಯ ಕಾರಣ ಎಂದಿದ್ದಾನೆ. ಆಡಳಿತಗಾರರು ರಾಜಕೀಯ ಹಾಗೂ ಸಾರ್ವಜನಿಕ ಒತ್ತಡಗಳಿಗೆ ಒಳಗಾಗಿದ್ದಾರೆ. ಇದರ ಫಲವಾಗಿ ಇವು ಮೆದುರಾಜ್ಯಗಳಾಗಿವೆ. ಶ್ರೀಮಂತರ, ಬಲಿಷ್ಠರ ಒತ್ತಡಕ್ಕೆ ಸಿಲುಕಿ ಭ್ರಷ್ಟಾಚಾರಕ್ಕೆ ಅನುವು ಮಾಡಿಕೊಟ್ಟಿದೆ. ಹೀಗಾಗಿ ಸಮಾಜ ಅಸಮತೆಗೆ ಪಕ್ಕಾಗಿದೆ. ಆಡಳಿತ ವ್ಯವಸ್ಥೆ ತನ್ನ ಮೆದುತನ ಬಿಟ್ಟುಕೊಡದೆ ಸಮತೆಯನ್ನು ಸಾಧಿಸಲಾರರು ಎಂಬುದು ಈತನ ನಂಬಿಕೆ.

	ಮಿರ್ಡಾಲನ ಪತ್ನಿ ಆಲ್ವಾ ವಿಶ್ವಶಾಂತಿಗಾಗಿ ದುಡಿದವರು. 1982ರಲ್ಲಿ ಇವರಿಗೂ ನೊಬೆಲ್ ಪ್ರಶಸ್ತಿ ಲಭಿಸಿತ್ತು. ಇಬ್ಬರೂ ತಂತಮ್ಮ ಕ್ಷೇತ್ರಗಳಲ್ಲಿ ಮಹತ್ಸಾಧನೆ ಮಾಡಿದವರು.

	ಮಿರ್ಡಾಲ್ 89ನೆಯ ವಯಸ್ಸಿನಲ್ಲಿ ಸ್ಟಾಕ್‍ಹೋಮ್‍ನ ಎಸ್ರ್ಟಾ ಆಸ್ಪತ್ರೆಯಲ್ಲಿ ತೀರಿಕೊಂಡ.	
	(ಸಿ.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ